ಏನೇ ಇದ್ದರೂ ಬ್ಲಾಗ್ಗೆ ಹಾಕಲು ತೊಂದರೆ ಇಲ್ಲ ಅಂದುಕೊಳ್ತೇನೆ.. ಏನಂತೀರಿ?
ಗೀತ- ಸಂಗೀತ
ಮುಗುದೆಯೊಡಲ ಪ್ರೇಮದಂತೆಹುದುಗಿತೆನ್ನ ಗೀತವು,
ಅವಿತು ಸ್ವಾತಿಮುತ್ತಿನಂತೆ
ಚಿಪ್ಪಿನೊಳಗೆ ಕಾವ್ಯವು.
ಮನದ ಭಾವ ತಿಳಿಸಲೆಂತು?
ಶಬ್ದದೊಡಲ ಬಗೆಯಲೆಂತು?
ಅರಿಯೆ... ನಾನು ವಿಹ್ವಲ!!!
ತೋರು ತಾಯೇ, ಕೌಶಲ.
ಪ್ರಕೃತಿ ಮಾತೆ ಪೊರೆಯೆ, ತನ್ನ
ಕೋಟಿ ಕೋಟಿ ಜೀವವ.
ತೆರೆಯಿತೆನ್ನ ಮನದ ಕದವ
ಪಕ್ಷಿ ಕಂಠ ಕಲರವ.
ಕುಹೂ ಕುಹೂ ಕೋಗಿಲೆಗೂ
ಮಾಮರದ ನಂಟೇ?
ಜೀವ ಭಾವಗಳ ಜೊತೆಗೂ
ಸುಖಸಂಬಂಧದ ಗಂಟೇ?
ಕಾಲಚಕ್ರ ತಿರುಗಲಿತ್ತ;
ಮನಕೆ ಕವಿದ ತೆರೆಯು ಸರಿದು
ಭ್ರಮೆಯ ಬದುಕು ವ್ಯರ್ಥವೆಂದು
ಹೊಳೆಯೆ, ಚಿತ್ತ ಸಾರ್ಥಕ...
ಮನದಂಗಳದಿ ಮಲಗಿದೆನ್ನ
ಕಾವ್ಯಭಾವ ಮಂಜುಳದನಿಯ
ಬದಿದೆಬ್ಬಿಸಲೀ ಸ್ಪೂರ್ತಿಜಾಲ
ಹೊರಸೂಸಲಿ ಭಕ್ತಿಭಾವ.
ಮನದ ಮಾತು ಹೊರಹೊಮ್ಮಿ
ಕವನ ರೂಪ ತಾಳಿತು
ಗೀತ - ಸಂಗೀತವಾಗಿ ಜಗದ
ಒಡಲ ಮೀರಿ ಹರಡಿತು
ಮನದ ಕಡಲೊಡಲೊಳಗಿಂದ
ಭೋರ್ಗರೆಯಿತು ಭಾವನೆ
ಪದಗಳದೇ ಚಿಲುಮೆಯಿಂದ
ಚಿಮ್ಮಿತು ಗೀತಬುಗ್ಗೆಯು
ಕಪ್ಪಿಟ್ಟ ಬಾನಿಂದ ಮರೆಯಾದ ನೇಸರ
ಮೂಡಿದ ಮನ:ಪಟಲದಲಿ
ತಿಳಿಯಾಯಿತು ಹೃದಯ , ಮಿಂಚು ಹರಿದು
ಹದದಿ ಬೆರೆತು ರಾಗದ ಜೊತೆ
ಮೂಡಿತು,
ಗೀತ - ಸಂಗೀತವು.
ಈ ವಾಕ್ಯವನ್ನು ಓದುತ್ತಿದ್ದೀರಿ ಅಂದ ಮೇಲೆ ಮೇಲಿನ ಕವಿತೆಯನ್ನೂ ಓದಿದ್ದೀರಿ ಅಂದುಕೊಳ್ಳಬಹುದಲ್ವಾ ?
ಧನ್ಯವಾದ,
ಶರಣ್ ...